ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಮಾದಕ ವಸ್ತುಗಳ ಮಾರಾಟದ ವಿರುದ್ಧ ಪೊಲೀಸರು ಬಿಗ್ ಆಪರೇಷನ್ ನಡೆಸಿದ್ದಾರೆ. ಗಾಂಜಾ ಮಾರಾಟ ಮಾಡುತ್ತಿದ್ದ ಒಟ್ಟು 06 ಪೆಡ್ಲರ್ಗಳನ್ನು ಬಂಧಿಸಿ ಎರಡು ಪ್ರತ್ಯೇಕ ಪ್ರಕರಣ ದಾಖಲಿಸಿದ್ದಾರೆ.
ವಿದ್ಯಾಗಿರಿ ಪೊಲೀಸ್ ಠಾಣೆ ವ್ಯಾಪ್ತಿಯ ಧಾರವಾಡ ಟೋಲ್ ನಾಕಾ ಹತ್ತಿರ ಸಾರ್ವಜನಿಕ ರಸ್ತೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಸಿಸಿಬಿ ವಿಭಾಗದ ಪಿಐ ರಮೇಶ್ ಕಾಂಬಳೆ ತಂಡ ವಶಕ್ಕೆ ಪಡೆದಿದೆ. ಬಂಧಿತರನ್ನು ವಸೀಂ ಅಸ್ಲಂ ಶೇಖ್, 25 ವರ್ಷ ಮತ್ತು ಅಜೀಜ್ ಮಹಮದ್ ಗೌಸ್, 26 ವರ್ಷ, ಇಬ್ಬರೂ ಜನತ್ ನಗರ, ಧಾರವಾಡ ಎಂದು ಗುರುತಿಸಲಾಗಿದೆ. ಅವರಿಂದ 175 ಗ್ರಾಂ ಗಾಂಜಾ, ಎರಡು ಮೊಬೈಲ್ ಹಾಗೂ ₹3,010 ನಗದು ವಶಪಡಿಸಿಕೊಳ್ಳಲಾಗಿದೆ.
ಇತ್ತ ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯ ಗುಡಿಹಾಳ ರಸ್ತೆ ಹತ್ತಿರ 4 ಜನರನ್ನು ಹಳೇಹುಬ್ಬಳ್ಳಿ ಠಾಣೆಯ ಪಿಐ ನೇತೃತ್ವದ ತಂಡ ಬಂಧಿಸಿದೆ. ಬಂಧಿತರನ್ನು ಮಹಮದ್ ಗೌಸ್ ಶಿಲೇದಾರ್, 24 ವರ್ಷ ವಿಶಾಲನಗರ, ಬಾಬಾಜಾನ್ ಯರಗಟ್ಟಿ, 27 ವರ್ಷ ನೇಕಾರನಗರ, ಜೇಮ್ಸ್ ಇಮಾನಿ, 21 ವರ್ಷ ಆನಂದನಗರ, ಮಹಮದ್ ಶೋಯೆಬ್ ಮುಲ್ಲಾ, 19 ವರ್ಷ ಶಿವಪುತ್ರನಗರ ಹಳೇಹುಬ್ಬಳ್ಳಿ ಎಂದು ಗುರುತಿಸಲಾಗಿದೆ. ಅವರಿಂದ 316 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದ್ದು, ಮತ್ತೊಬ್ಬ ಆರೋಪಿ ಅರ್ಮಾನ್ ತಲೆಮರೆಸಿಕೊಂಡಿದ್ದಾನೆ.
ಮಾದಕ ವಸ್ತುಗಳ ವಿರುದ್ಧ ನಿರಂತರ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.